ಭಾರತದ ಮಣ್ಣುಗಳ ಬಗ್ಗೆ ಮಾಹಿತಿ | Information About Soils of India in Kannada

ಭಾರತದ ಮಣ್ಣುಗಳ ಬಗ್ಗೆ ಮಾಹಿತಿ Information About Soils of India Bhartada Mannugla Bagge Mahiti in Kannada

ಭಾರತದ ಮಣ್ಣುಗಳ ಬಗ್ಗೆ ಮಾಹಿತಿ

Information About Soils of India in Kannada

ಈ ಲೇಖನಿಯಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮಣ್ಣು

ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮೇಲ್ಭಾಗದ ತೆಳು ಪದರವೇ ಮಣ್ಣು. ಕೃಷಿಯು ಭಾರತೀಯರ ಪ್ರಮುಖ ವೃತ್ತಿಯಾಗಿದ್ದು ಮಣ್ಣು ದೇಶದ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ. ಕೃಷಿ ಉತ್ಪಾದನೆಯು ಮೂಲತಃ ಮಣ್ಣಿನ ಫಲವತ್ತತೆಯನ್ನಾಧರಿಸಿದೆ. ಭಾರತದ ವಿವಿಧ ಪ್ರಕಾರ ಮಣ್ಣಿನ ಉತ್ಪತ್ತಿಯು ಮೂಲ ಶಿಲೆಗಳು, ಮೇಲ್ಮೈಲಕ್ಷಣ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಗಳಿಗೆ ಸಂಬಂಧಿಸಿದೆ. ಹೀಗಾಗಿ ಭಾರತದ ಮಣ್ಣಿನ ವೈವಿಧ್ಯವಿದೆ.

ಮಣ್ಣಿನ ವಿಧಗಳು

ಭಾರತದ ಮಣ್ಣುಗಳನ್ನು ಪ್ರಮುಖವಾಗಿ ೬ ವಿಧವಾಗಿ ವಿಂಗಡಿಸಬಹುದು.

ಮೆಕ್ಕಲು ಮಣ್ಣು :

ಪ್ರಧಾನವಾಗಿ ಮೆಕ್ಕಲನ್ನೋಳಗೊಂಡ ಮಣ್ಣನ್ನು ಮೆಕ್ಕಲು ಮಣ್ಣು ಎನ್ನುವರು. ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ ಇಂತಹ ಮಣ್ಣು ಉತ್ಪತ್ತಿಯಾಗುತ್ತದೆ. ಉದಾಹರಣೆ – ಸಿಂಧೂ, ಗಂಗಾ ನದಿ ಬಯಲು. ಸಮುದ್ರ ಅಲೆಗಳ ಸಂಚಯನದಿಂದ ತೀರ ಪ್ರದೇಶದಲ್ಲಿಯೂ ನಿರ್ಮಾಣವಾಗುತ್ತದೆ. ಭಾರತದಲ್ಲಿ ಮೆಕ್ಕಲು ಮಣ್ಣು ವಿಸ್ತಾರವಾಗಿ ಹಂಚಿಕೆಯಾಗಿದ್ದು, ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಅದು ದೇಶದ ಕೃಷಿ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಸುಮಾರು ೧೫ ಲಕ್ಷ ಚ. ಕಿ. ಮೀ ಪ್ರದೇಶದಲ್ಲಿ ಹಂಚಿಕೆಯಾಗಿದೆ. ಈ ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋಧಿ, ಭತ್ತ, ಕಬ್ಬು, ಹತ್ತಿ ಮತ್ತು ಸೆಣಬು ಇವುಗಳನ್ನು ಬೆಳೆಯಲು ಈ ಮಣ್ಣು ಯೋಗ್ಯವಾಗಿದೆ.

ಭಾರತದಲ್ಲಿ ಮೆಕ್ಕಲು ಮಣ್ಣು ಹೆಚ್ಚಾಗಿ ನದಿ ಬಯಲುಗಳಲ್ಲಿ ಹಂಚಿಕೆಯಾಗಿದೆ. ಉದಾಹರಣೆಗೆ ಸಟ್ಲೇಜ್‌, ಗಂಗಾ, ಮತ್ತು ಬ್ರಹ್ಮಪುತ್ರ ಹಾಗೂ ನರ್ಮದ, ತಾಪಿ, ಮಹಾನದಿ, ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಬಯಲು.

ಕಪ್ಪುಮಣ್ಣು :

ಇದನ್ನು ರೇಗೂರ್‌ ಮಣ್ಣು ಎಂತಲೂ ಹಾಗೂ ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ “ಕಪ್ಪು ಹತ್ತಿ ಮಣ್ಣು” ಎಂತಲೂ ಕರೆಯುತ್ತಾರೆ. ಇದು ಬಸಾಲ್ಟ್‌ ಶಿಲಾಕರಣದಿಂದ ಉತ್ಪತ್ತಿಯಾದುದು. ಆದ್ದರಿಂದ ಇದು ಕಡು ಬೂದು ಮತ್ತು ಕಪ್ಪು ಬಣ್ಣವುಳ್ಳದ್ದು ಇದರಲ್ಲಿ ಜೇಡಿ ಮಿಶ್ರಣ ಹೆಚ್ಚು. ಒತ್ತೋತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘ ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹತ್ತಿ, ಕಬ್ಬು, ಜೋಳ, ಮೆಕ್ಕೆಜೋಳ, ದ್ವಿದಳಧಾನ್ಯ, ಗೋಧಿ ಮತ್ತು ಮೆಣಸಿನಕಾಯಿ ಬೆಳೆಗಳ ಸಾಗುವಳಿಗೆ ಸೂಕ್ತವಾದ ಮಣ್ಣಾಗಿದೆ.

ಭಾರತದಲ್ಲಿ ಕಪ್ಪು ಮಣ್ಣು ದಖನ್‌ ಪ್ರಸ್ಥಭೂಮಿಯ ಬಸಾಲ್ಟ್‌ ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಈ ವಲಯಕ್ಕೆ ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣದ ಕೆಲಭಾಗಗಳು, ಉತ್ತರ ಕರ್ನಾಟಕ, ಗುಜರಾತ್‌ ಮತ್ತು ತಮಿಳುನಾಡಿನ ಕೆಲಭಾಗಗಳು ಸೇರುತ್ತವೆ. ಸುಮಾರು ೫. ೪೬ ಲಕ್ಷ ಚ. ಕಿ. ಮೀ ವಿಸ್ತೀರ್ಣದಲ್ಲಿ ಕಪ್ಪು ಮಣ್ಣು ಹಂಚಿಕೆಯಾಗಿದೆ.

ಕೆಂಪುಮಣ್ಣು :

ಇದು ಗ್ರಾನೈಟ್‌, ನೀಸ್‌ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾದುದು. ಸಾಮಾನ್ಯವಾಗಿ ಕೆಂಪು ಮತ್ತು ಕೆಂಪುಕಂದು ಬಣ್ಣವುಳ್ಳದ್ದು. ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ. ಹೀಗಾಗಿ ಇದಕ್ಕೆ ತೇವಾಂಶ ಸಂಗ್ರಹದ ಸಾಮಾರ್ಥ್ಯ ಕಡಿಮೆ. ಈ ವಿವಿಧ ಮಣ್ಣು ಸುಮಾರು ೫.೨ ಲಕ್ಷ ಚ. ಕಿ. ಮೀ. ಕ್ಷೇತ್ರದಲ್ಲಿ ಹಂಚಿಕೆಯಾಗಿದೆ. ತಮಿಳುನಾಡಿನಲ್ಲಿ ಕೆಂಪುಮಣ್ಣು ವಿಶಾಲವಾದ ಪ್ರದೇಶದಲ್ಲಿ ಹಂಚಿಕೆಯಾಗಿದೆ. ಜೊತೆಗೆ ಅದು ದಕ್ಷಿಣ ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಕೇರಳ, ಗೋವ, ಬಿಹಾರ, ಉತ್ತರಪ್ರದೇಶ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.

ಕೆಂಪುಮಣ್ಣು ರಾಗಿ, ತೃಣಧಾನ್ಯ, ಶೇಂಗ, ತಂಬಾಕು, ಮತ್ತು ಆಲೂಗೆಡ್ಡೆಗಳ ಬೇಸಾಯಕ್ಕೆ ಸೂಕ್ತವಾದ ಮಣ್ಣಾಗಿದೆ. ಆದರೆ ನೀರಾವರಿ ಸೌಲಭ್ಯದಿಂದ ಈ ಮಣ್ಣಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು.

ಜಂಬಿಟ್ಟಿಗೆ ಮಣ್ಣು :

ಈ ವಿಧದ ಮಣ್ಣು ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಯುಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ. ಅದು ಹೆಚ್ಚಾಗಿ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಛೋಟನಾಗಾಪುರ ಪ್ರಸ್ಥಭೂಮಿ, ಮೆಘಾಲಯ ಪ್ರಸ್ಥಭೂಮಿ, ರಾಜಮಹಲ್‌ ಬೆಟ್ಟಗಳು, ವಿಂಧ್ಯಾ ಮತ್ತು ಸಾತ್ಪುರ ಸರಣಿಗಳಲ್ಲಿ ಹಂಚಿಕೆಯಾಗಿದೆ. ಸುಮಾರು ೨. ೪೮ ಲಕ್ಷ ಚ. ಕಿ. ಮೀ. ಪ್ರದೇಶವನ್ನಾವರಿಸಿದೆ. ಇದು ಜಲವಿಲೀನಕರಣಕ್ಕೊಳಪಡುವುದರಿಂದ ಫಲವತ್ತಾದುದಲ್ಲ. ಕೃಷಿಗೆ ಅಷ್ಟೊಂದು ಉಪಯುಕ್ತವಲ್ಲ. ಈ ಮಣ್ಣಿನಲ್ಲಿ ಗೋಡಂಬಿ, ರಬ್ಬರ್‌, ಚಹ, ಕಾಫೀ ಮತ್ತು ಭತ್ತಗಳನ್ನು ಬೆಳೆಯಬಹುದು.

ಮರುಭೂಮಿ ಮಣ್ಣು :

ಮರುಭೂಮಿ ಮತ್ತು ಅರೆಮರುಭೂಮಿಯ ಪರಿಸ್ಥಿತಿಯುಳ್ಳ ಭಾಗಗಳಲ್ಲಿ ಈ ವಿಧದ ಮಣ್ಣು ಉತ್ಪತ್ತಿಯಾಗಿರುತ್ತವೆ. ಭಾರತದಲ್ಲಿ ಅದು ಹೆಚ್ಚಾಗಿ ವಾಯುವ್ಯ ಭಾಗದಲ್ಲಿ ಕಂಡುಬರುತ್ತದೆ. ಉದಾಹರಣೆಗೆ ರಾಜಸ್ತಾನದ ಬಹುಭಾಗ, ದಕ್ಷಿಣ ಹರಿಯಾಣ, ಪಂಜಾಬ್‌ ಮತ್ತು ಗುಜರಾತಿನ ಉತ್ತರ ಭಾಗಗಳು. ಈ ವಿಧದ ಮಣ್ಣು ಸುಲಭವಾಗಿ ಪುಡಿಯಾಗುವ ಗುಣವುಳ್ಳದ್ದು ಮತ್ತು ಇದರಲ್ಲಿ ಉಪ್ಪಿನ ಅಂಶವು ಹೆಚ್ಚಿರುತ್ತದೆ. ಇದರಲ್ಲಿ ಮರಳಿನ ಪ್ರಮಾಣ ಹೆಚ್ಚು, ತೇವಾಂಶ ಮತ್ತು ಸಸ್ಯಾಂಶಗಳು ಕಡಿಮೆ. ವಿವಿಧ ಬೆಳೆ ಬೆಳೆಯಲು ಉಪಯುಕ್ತವಲ್ಲ. ನೀರಾವರಿ ಸೌಲಭ್ಯವಿರುವಲ್ಲಿ ಕೆಲವು ಬೆಳೆಗಳನ್ನು ಬೆಳೆಯಬಹುದು. ಸುಮಾರು ೧.೪೨ ಲಕ್ಷ ಚ. ಕಿ. ಮೀ ಗಳಲ್ಲಿ ಇಂತಹ ಮಣ್ಣು ಹಂಚಿಕೆಯಾಗಿದೆ.

ಪರ್ವತ ಮಣ್ಣು :

ಈ ಪ್ರಕಾರದ ಮಣ್ಣು ಅರಣ್ಯಗಳಿಂದಾವರಿಸಿದ ಪರ್ವತ ಮತ್ತು ಬೆಟ್ಟಗಳ ಇಳಿಜಾರುಗಳಲ್ಲಿ ಕಂಡುಬರುತ್ತದೆ. ಜೈವಿಕ ವಸ್ತುಗಳು ಕೊಳೆಯುವುದರಿಂದ ಇಂತಹ ಮಣ್ಣು ನಿರ್ಮಾಣವಾಗುವುದು. ಹೀಗಾಗಿ ಈ ಮಣ್ಣಿನಲ್ಲಿ ಸಸ್ಯಾಂಶ ಅಧಿಕವಾಗಿದ್ದು ಫಲವತ್ತಾಗಿರುತ್ತದೆ. ನೆಡುತೋಟದ ಬೆಳೆಗಳ ಸಾಗುವಳಿಗೆ ಸೂಕ್ತವಾದುದು. ಉದಾಹರಣೆಗೆ ಚಹ, ಕಾಫೀ, ಮತ್ತು ಹಣ್ಣು ಬೆಳೆಗಳು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಮಣಿಪುರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಪರ್ವತ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ಇದು ಸುಮಾರು ೨.೮೫ ಲಕ್ಷ ಚ. ಕಿ. ಮೀ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ.

FAQ

ವಿಶ್ವ ಮಣ್ಣು ದಿನವನ್ನು ಯಾವಾಗ ಆಚರಿಸುತ್ತಾರೆ ?

ಡಿಸೆಂಬರ್‌ ೫

ಮಣ್ಣಿನ ವಿಧಗಳನ್ನು ತಿಳಿಸಿ ?

ಕಪ್ಪು ಮಣ್ಣು, ಜಂಬಿಟ್ಟಿಗೆ ಮಣ್ಣು, ಪರ್ವತ ಮಣ್ಣು, ಕೆಂಪು ಮಣ್ಣು

ಇತರೆ ವಿಷಯಗಳು :

ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ

ಪ್ರಭುತ್ವದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *